ತಕಾವಿ ಸಾಲ -
ರೈತನ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ದೃಷ್ಟಿಯಿಂದ ಸರ್ಕಾರ ನೀಡುವ ಸಾಲ. ಭಾರತದಲ್ಲಿ ಬ್ರಿಟಿಷ್ ಸರ್ಕಾರ ಏರ್ಪಡುವುದಕ್ಕೆ ಪೂರ್ವದಿಂದಲೂ ತಕಾವಿ ಸಾಲ ಪದ್ಧತಿ ಜಾರಿಯಲ್ಲಿತ್ತು. ಬ್ರಿಟಿಷ್ ಸರ್ಕಾರ ಈ ಪದ್ಧತಿಯನ್ನು ಮುಂದುವರಿಸಿತು. 1871-1879ರಲ್ಲಿ ಬ್ರಿಟಿಷ್ ಸರ್ಕಾರ ಅನೇಕ ತಕಾವಿ ಕಾನೂನುಗಳನ್ನು ಹೊರಡಿಸಿ ರೈತರಿಗೆ ಸಾಲಸೌಲಭ್ಯವನ್ನು ಒದಗಿಸುವ ಪ್ರಯತ್ನ ಮಾಡಿತು. ಅದರೂ ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗದ ಕಾರಣ 1880ರ ಕ್ಷಾಮ ಸಮಿತಿಯ ಶಿಫಾರಸುಗಳ ಮೇರೆಗೆ ಭೂ ಅಭಿವೃದ್ಧಿ ಸಾಲದ ಅಧಿನಿಯಮ (1883) ಮತ್ತು ರೈತನ ಸಾಲಗಳ ಅಧಿನಿಯಮ (1884)-ಇವನ್ನು ಜಾರಿಗೆ ತಂದು ಬ್ರಿಟಿಷ್ ಸರ್ಕಾರ ತಕಾವಿ ಸಾಲ ಪದ್ಧತಿಯನ್ನು ವ್ಯವಸ್ಥಿತಗೊಳಿಸಿತು. ತಕಾವಿ ಸಾಲವನ್ನು ಪ್ರವಾಹ, ಕ್ಷಾಮ ಮುಂತಾದ ತುರ್ತು ಪರಿಸ್ಥಿತಿಗಳುಂಟಾದಾಗ ಮಾತ್ರ ಕೊಡಲಾಗುತ್ತಿತ್ತು. ಅನಂತರ ತಕಾವಿ ಸಾಲ ಭೂ ಅಭಿವೃದ್ಧಿ ಹಾಗೂ ರೈತನ ಉಳುಮೆ ಅವಶ್ಯಕತೆಗಳಿಗೂ ಸಿಗುವಂತಾಯಿತು. ಭೂ ಅಭಿವೃದ್ಧಿ ಸಾಲ ಅಧಿನಿಯಮದಿಂದ ದೀರ್ಘಾವಧಿ ಸಾಲವನ್ನೂ ರೈತರ ಸಾಲಗಳ ಅಧಿನಿಯಮದಿಂದ ಅಲ್ಪಾವಧಿ ಸಾಲವನ್ನೂ ನೀಡುವ ಅನುಕೂಲ ಏರ್ಪಟ್ಟಿತು. 1943ರಲ್ಲಿ ದೇಶಾದ್ಯಂತ ಜಾರಿಗೆ ತರಲಾದ ಅಧಿಕ ಆಹಾರೋತ್ಪಾದನೆಯ ಚಳವಳಿಯಿಂದ ತಕಾವಿ ಸಾಲದ ಕ್ಷೇತ್ರ ವ್ಯಾಪ್ತಿ ಮತ್ತೂ ವಿಸ್ತರಿಸಿತು. ಅಧಿಕ ಆಹಾರವನ್ನು ಉತ್ಪಾದಿಸಲು ನೆರವಾಗುವ ಯೋಜನೆಗಳಿಗೂ ಸರ್ಕಾರ ತಕಾವಿ ಸಾಲಗಳನ್ನು ಕೊಡುವಂತಾಯಿತು. 1947ರಲ್ಲಿ ಭಾರತ ವಿಭಜನೆಯಾದಾಗ ನಿರಾಶ್ರಿತರ ಪುನರ್ವಸತಿ ಕಾರ್ಯಕ್ಕಾಗಿ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ ಸರ್ಕಾರಗಳಿಗೆ ಕೃಷಿ ಸಾಲ ಸೌಲಭ್ಯಗಳನ್ನು ನೀಡುವಂತೆ ಆದೇಶ ನೀಡಿ ಕೇಂದ್ರ ಸರ್ಕಾರ ಈ ರಾಜ್ಯ ಸರ್ಕಾರಗಳಿಗೆ ಧನಸಹಾಯ ನೀಡಲು ಪ್ರಾರಂಭಿಸಿತು. ಹೀಗಾಗಿ ರೈತರು ಕಷ್ಟದಶೆಯಲ್ಲಿದ್ದಾಗ ಮಾತ್ರ ನೀಡಲಾಗುತ್ತಿದ್ದ ತಕಾವಿ ಸಾಲದ ಕ್ಷೇತ್ರವ್ಯಾಪ್ತಿ ವಿಸ್ತಾರಗೊಂಡು ಅದು ರೈತರ ಅನೇಕ ಅವಶ್ಯಕತೆಗಳನ್ನು ತುಂಬುವಂಥದಾಗಿ ಪರಿಣಮಿಸಿತು. ತಕಾವಿ ಸಾಲ ಒಂದು ಚಾರಿತ್ರಿಕ ಅಂಶವಾಗಿ ಮಾತ್ರ ಉಳಿದಿದೆ.

ಸರ್ಕಾರ ದೀರ್ಘಾವಧಿ ಹಾಗೂ ಅಲ್ಪಾವಧಿ ಸಾಲಗಳನ್ನು ಹಣ ರೂಪದಲ್ಲಿ ಕೊಡುವುದಲ್ಲದೆ, ಸುಧಾರಿಸಿದ ಬೀಜ, ಗೊಬ್ಬರ, ಉಪಕರಣ ಮೊದಲಾದವನ್ನು ರೈತರಿಗೆ ಸಾಲವಾಗಿ ನೀಡುವುದು ತಕಾವಿ ಸಾಲದ ಮುಖ್ಯ ಲಕ್ಷಣ. ಬಡ್ಡಿಯ ದರ ಅತ್ಯಂತ ಕಡಿಮೆಯಾದ್ದರಿಂದ (3 1/8% - 6 1/4%) ಈ ಸಾಲ ಯೋಜನೆ ರೈತರಿಗೆ ಆಕರ್ಷಕವಾಯಿತು. ಆದರೂ ಈ ಪದ್ಧತಿಯನ್ನು ಪರಿಶೀಲಿಸಿದ ಅನೇಕ ಸಮಿತಿಗಳು ಇದರ ನ್ಯೂನತೆಗಳನ್ನು ತೋರಿಸಿಕೊಟ್ಟುವಲ್ಲದೆ ಇದು ಭವಿಷ್ಯದಲ್ಲಿ ವಹಿಸಬೇಕಾದ ಪಾತ್ರವನ್ನು ಕುರಿತು ಹಲವಾರು ಸಲಹೆಗಳನ್ನು ನೀಡಿದವು.

ಅಪರ್ಯಾಪ್ತವಾದ ಹಣವನ್ನು ಅಸಮರ್ಪಕ ರೀತಿಯಲ್ಲಿ ಆಯುಕ್ತ ಅಭಿಕರಣವೊಂದು ವಿತರಣೆ ಮಾಡುವುದೇ ತಕಾವಿ ಸಾಲ ಪದ್ಧತಿ ಎಂಬುದಾಗಿ, ಅಖಿಲ ಭಾರತ ಗ್ರಾಮಾಂತರ ಸಾಲಗಳ ಅವಲೋಕನಕ್ಕೆ ನೇಮಕವಾಗಿದ್ದ ಗೋರ್ವಾಲಾ ಸಮಿತಿ (1954) ವಿವರಿಸಿತು. ತಕಾವಿ ಸಾಲದ ನಿರ್ವಹಣೆಯ ಬಗ್ಗೆ ಗೋರ್ವಾಲಾ ಸಮಿತಿ ಹೊರಗೆಡಹಿರುವ ಮುಖ್ಯ ಅಂಶಗಳು ಇವು: 1. ತಕಾವಿ ಸಾಲವನ್ನು ಸಾಕಷ್ಟು ಪರಿಮಾಣದಲ್ಲಿ ನೀಡಲಾಗಿಲ್ಲ. ಸಮಿತಿಯ ಅವಲೋಕನದ ಅವಧಿಯಲ್ಲಿ (1951 - 52) ರೈತರು ತಮ್ಮ ಅವಶ್ಯಕತೆಯ ಶೇ. 3ರಷ್ಟು ಸಾಲವನ್ನು ಮಾತ್ರ ಈ ಮೂಲದಿಂದ ಪಡೆದರು - (ಆಗಿನ ಮೈಸೂರು ರಾಜ್ಯಕ್ಕೆ ಸಂಬಂಧಿಸಿದಂತೆ ಕೇವಲ 0.02%). 2. ಸಾಲದ ಹಂಚಿಕೆ ಅಸಮಾನವಾದ ರೀತಿಯಲ್ಲಿ ನಡೆದಿದೆಯೆಂಬುದು ಇನ್ನೊಂದು ದೋಷ. ದೊಡ್ಡ ರೈತನಿಗೆ ಮಧ್ಯಮ ಹಾಗೂ ಸಣ್ಣ ರೈತರಿಗಿಂತ ಅನುಕ್ರಮವಾಗಿ ನಾಲ್ಕು ಮತ್ತು ಹತ್ತು ಪಟ್ಟು ಹಣವನ್ನು ಸಾಲವಾಗಿ ನೀಡಲಾಗಿತ್ತು. 3. ಸಾಲವನ್ನು ಮಂಜೂರು ಮಾಡುವುದರಲ್ಲಿ ವಿಳಂಬವಾಗಿದೆ. ರೈತನಿಗೆ ಅವಶ್ಯಕತೆಯಿದ್ದಾಗ ಸಾಲವನ್ನು ನೀಡಿಲ್ಲ. 4. ಹಣವನ್ನು ರೈತರು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ, ಇಲ್ಲವೆ ಎಂಬುದರ ಮೇಲ್ವಿಚಾರಣೆಯನ್ನು ಸರ್ಕಾರಿ ಅಧಿಕಾರಿಗಳು ಮಾಡಲಿಲ್ಲ. 5. ವಿವಿಧ ಬಗೆಯ, ದೀರ್ಘಾವಧಿ ಮತ್ತು ಅಲ್ಪಾವಧಿಗಳ, ಸಾಮಗ್ರಿ ರೂಪದ ಸಾಲಗಳ ವಿತರಣೆಯ ಕಾರ್ಯವನ್ನು ಸರ್ಕಾರದ ಬೇರೆ ಬೇರೆ ಶಾಖೆಗಳಿಗೆ ವಹಿಸಿಕೊಡಲಾಗಿತ್ತು ಅದರೆ ಆ ಶಾಖೆಗಳ ಕಲಾಪಗಳಲ್ಲಿ ಸಮರ್ಪಕ ಸಂಘಟನೆ ಇಲ್ಲದಂತಾಗಿತ್ತು.

ಗೋರ್ವಾಲಾ ಸಮಿತಿ ಈ ಕೊರತೆಗಳನ್ನು ಗಮನಿಸಿ ತಕಾವಿ ಸಾಲ ಪದ್ಧತಿಯ ನಿರ್ವಹಣೆಯ ಬಗ್ಗೆ ಎರಡು ಸಲಹೆಗಳನ್ನು ನೀಡಿತು; 1. ತಕಾವಿ ಸಾಲಗಳನ್ನು ಕ್ಷಾಮ, ಪ್ರವಾಹ, ಅಭಾವ ಮೊದಲಾದ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಮಾತ್ರ ಮಿತಿಗೊಳಿಸಬೇಕು. 2. ತಕಾವಿ ಸಾಲ ಮತ್ತು ಸಹಕಾರಿ ಸಾಲಗಳಲ್ಲಿ ಪರಸ್ಪರ ಸಂಯೋಜನೆಯನ್ನುಂಟುಮಾಡಬೇಕು.

ಈ ಸಲಹೆಗಳನ್ನು ಸರ್ಕಾರ ತತ್ತ್ವಶಃ ಒಪ್ಪಿಕೊಂಡರೂ ಇವನ್ನು ಅನುಷ್ಠಾನಕ್ಕೆ ತರುವಂಥ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದ್ದರಿಂದ ತಕಾವಿ ಸಾಲಪದ್ಧತಿ ಮತ್ತೆ ಅನೇಕ ಸಮಿತಿಗಳು ಪರಿಶೀಲನೆಗೆ ಒಳಪಟ್ಟಿತು. ತಕಾವಿ ಸಾಲವನ್ನು ಸಹಕಾರಿ ಬ್ಯಾಂಕುಗಳ ಮೂಲಕ ಒದಗಿಸಬೇಕೆಂದು ರಾಷ್ಟ್ರೀಯ ಅಭಿವೃದ್ಧಿ ಸಮಿತಿ 1958ರಲ್ಲಿ ಸಲಹೆ ನೀಡಿತು. ಈ ಸಲಹೆಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತಿಳಿಯಪಡಿಸುತ್ತ, ಕಷ್ಟದಶೆಯ ತಕಾವಿ ಬಿಟ್ಟು, ಉಳಿದ ಸಹಾಯವನ್ನು ಸಹಕಾರಿ ಬ್ಯಾಂಕುಗಳ ಮೂಲಕವೇ ನೀಡಬೇಕೆಂದು ಆದೇಶ ಕೊಟ್ಟಿತು. ತಕಾವಿ ರೂಪದಲ್ಲಿ ನೀಡಲಿರುವ ಧನವನ್ನೂ ಸಹಕಾರಿ ಬ್ಯಾಂಕುಗಳ ವಶಕ್ಕೆ ರಾಜ್ಯ ಸರ್ಕಾರಗಳು ನೀಡಬೇಕೆಂದು 1960ರಲ್ಲಿ ನೇಮಕವಾದ ಸಹಕಾರ ಸಾಲ ಸಮಿತಿ ಸಲಹೆ ಮಾಡಿತು.

ಈ ಸಲಹೆಗೆ ಅನುಗುಣವಾಗಿ ಕೆಲವು ರಾಜ್ಯ ಸರ್ಕಾರಗಳು ತಕಾವಿ ಸಾಲಗಳನ್ನು ಸಹಕಾರಿ ಬ್ಯಾಂಕುಗಳ ಮೂಲಕ ಒದಗಿಸಲು ಪ್ರಾರಂಭಿಸಿದುವು. ಆದರೂ ಈ ಬಗ್ಗೆ ಪ್ರಗತಿ ಅಷ್ಟು ಉತ್ತೇಜಕವಾಗಿರಲಿಲ್ಲ. ತಕಾವಿ ಸಾಲಗಳನ್ನು ಸಹಕಾರಿ ಬ್ಯಾಂಕುಗಳು ಒದಗಿಸುವುದರಲ್ಲಿ ಕಂಡುಬರುವ ತೊಂದರೆಗಳೇನೆಂಬುದನ್ನು ತನಿಖೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ 1961ರಲ್ಲಿ ತಕಾವಿ ಸಾಲ ಮತ್ತು ಸಹಕಾರಿ ಉದರಿ ಸಮಿತಿಯನ್ನು ನೇಮಿಸಿತು. ಈ ಸಮಿತಿಯ ಸಲಹೆಗಳನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರ 1963ರಲ್ಲಿ ರಾಜ್ಯ ಸರ್ಕಾರಗಳಿಗೆ ಕೆಲವು ಆದೇಶಗಳನ್ನು ಕಳುಹಿಸಿತು: 1. ತಕಾವಿ ಸಾಲಗಳನ್ನು ಸಹಕಾರಿ ಬ್ಯಾಂಕುಗಳ ಮೂಲಕ ನೀಡುವುದು ಅವಶ್ಯಕವಾದರೂ ಸಹಕಾರಿ ಬ್ಯಾಂಕುಗಳು ಚೆನ್ನಾಗಿ ವೃದ್ಧಿ ಹೊಂದಿರುವ ಕಡೆ ಮಾತ್ರ ಈ ಯೋಜನೆಯನ್ನು ಜಾರಿಗೆ ತರಬೇಕು. 2. ಜಮೀನು ಅಡಮಾನ ಬ್ಯಾಂಕು ವ್ಯವಸ್ಥೆಯಿರುವ ಕಡೆ ದೀರ್ಘಾವಧಿ ತಕಾವಿ ಸಾಲ ನೀಡುವುದನ್ನು ಸರ್ಕಾರಗಳು ನಿಲ್ಲಿಸಬೇಕು.

1966ರಲ್ಲಿ ನೇಮಕವಾದ ಅಖಿಲ ಭಾರತ ಗ್ರಾಮಾಂತರ ಸಾಲ ಪುನಃ ಪರಿಶೀಲನಾ ಸಮಿತಿ (ವೆಂಕಟಪ್ಪಯ್ಯ ಸಮಿತಿ) ತನ್ನ ವರದಿಯಲ್ಲಿ (1969) ತಕಾವಿ ಸಾಲಗಳ ಅಲ್ಪಪರಿಮಾಣ, ಅವುಗಳ ಮಂಜೂರಾತಿಯಲ್ಲಿಯ ವಿಳಂಬ ಮತ್ತು ಭ್ರಷ್ಟಾಚಾರ, ಮೇಲ್ವಿಚಾರಣೆ ಇಲ್ಲದಿರುವಿಕೆ ಮೊದಲಾದ ಕೊರತೆಗಳನ್ನು ಎತ್ತಿ ತೋರಿಸಿತು. ಸಾಲ ನೀಡಿಕೆಯ ಬಗ್ಗೆ ರಾಜ್ಯ ಸರ್ಕಾರಗಳು ಏಕರೀತಿಯ ಧೋರಣೆ ಅನುಸರಿಸದಿರುವುದನ್ನೂ ಗಮನಿಸಿತು. ಕೆಲವು ರಾಜ್ಯ ಸರ್ಕಾರಗಳು ತಕಾವಿ ಸಾಲವನ್ನು ಸಹಕಾರಿ ಬ್ಯಾಂಕುಗಳ ಮೂಲಕ ನೀಡಿದರೆ, ಕೆಲವು ಸರ್ಕಾರಗಳು ರೈತರಿಗೆ ನೇರವಾಗಿ ನೀಡುತ್ತಿದ್ದುವು. ಕೆಲವು ರಾಜ್ಯಗಳಲ್ಲಿ ಸಹಕಾರಿ ಬ್ಯಾಂಕುಗಳ ಸದಸ್ಯರಲ್ಲದವರಿಗೆ ಮಾತ್ರ ತಕಾವಿ ಸಾಲ ನೀಡಲಾದರೆ, ಉಳಿದವಲ್ಲಿ ಸಹಕಾರಿ ಬ್ಯಾಂಕುಗಳಿಂದಲೂ ಸರ್ಕಾರದಿಂದಲೂ ರೈತರು ಸಾಲ ಸೌಲಭ್ಯ ಪಡೆದಿರುವುದು ಕಂಡುಬಂದಿತ್ತು. ಜೊತೆಗೆ ಸಹಕಾರಿ ಬ್ಯಾಂಕಿನ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿದರದಲ್ಲಿ ತಕಾವಿ ಸಾಲವನ್ನು ಒದಗಿಸುವುದರ ಮೂಲಕ ಹಾಗೂ ಹೆಚ್ಚು ಇಳುವರಿ ಕೊಡುವ ಯೋಜನೆ ಮತ್ತು ಸಾಂದ್ರ ಸಾಗುವಳಿ ಕೃಷಿಕ್ಷೇತ್ರ ಯೋಜನೆಗಳು ಜಾರಿಯಲ್ಲಿರುವಲ್ಲಿ ಅಧಿಕ ಪರಿಮಾಣದಲ್ಲಿ ಸಾಲವನ್ನು ಒದಗುಸುವುದರ ಮೂಲಕ ರಾಜ್ಯ ಸರ್ಕಾರಗಳು ಸಹಕಾರಿ ಬ್ಯಾಂಕುಗಳ ಬೆಳವಣಿಗೆಗೆ ಕುಂದುಂಟುಮಾಡಿದೆ ಎಂದು ಈ ಸಮಿತಿ ಅಭಿಪ್ರಾಯಪಟ್ಟಿತು. ವೆಂಕಟಪ್ಪಯ್ಯ ಸಮಿತಿ ತಕಾವಿ ಸಾಲವನ್ನು ಕುರಿತು ಕೆಲವು ಸಲಹೆಗಳನ್ನು ಮಾಡಿತು: 1. ತಕಾವಿ ಸಾಲವನ್ನು ಸಹಕಾರಿ ಬ್ಯಾಂಕುಗಳು ಮತ್ತು ಇತರ ಗ್ರಾಮಾಂತರ ಹಣಕಾಸು ಸಂಸ್ಥೆಗಳು ಇಲ್ಲದ ಕಡೆ ಮಾತ್ರ, ಕೃಷಿಕಾರ್ಯ ಚಟುವಟಿಕೆಗಳಿಗೆ ಕುಂದುಂಟಾಗಬಾರದೆಂಬ ಉದ್ದೇಶದಿಂದ ಮಾತ್ರ ಒದಗಿಸಬೇಕು. ಆದರೆ ತಕಾವಿ ಸಾಲ ವ್ಯವಸ್ಥೆ ತಾತ್ಕಾಲಿಕವಾಗಿರಬೇಕು. ಪ್ರತಿ ರಾಜ್ಯ ಸರ್ಕಾರವೂ ತಕಾವಿ ಸಾಲಗಳನ್ನು ಕೊನೆಗೊಳಿಸಲು ಒಂದು ತಾರೀಖನ್ನು ನಿರ್ಧರಿಸಿಕೊಳ್ಳಬೇಕು. ಆ ವೇಳೆಗೆ ಸಹಕಾರಿ ಉದರಿ ವ್ಯವಸ್ಥೆಯನ್ನು ತಕಾವಿ ಸಾಲ ಕ್ಷೇತ್ರಗಳಲ್ಲೂ ಜಾರಿಗೆ ತರಬೇಕು. 2. ತಕಾವಿ ಸಾಲ ವ್ಯವಸ್ಥೆಯನ್ನು ಮುಂದುವರಿಸಿದಷ್ಟು ಕಾಲ ಸಾಲ ನೀಡುವಿಕೆಯ ಬಗ್ಗೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು: i. ತಕಾವಿ ಸಾಲಗಳನ್ನು ಅಧಿಕೃತ ಕೃಷಿಯೋಜನೆಗಳು ಕಾರ್ಯರೂಪದಲ್ಲಿರುವ ಕಡೆ ಹಾಗೂ ಸಹಕಾರಿ ಬ್ಯಾಂಕುಗಳು ಇಲ್ಲದಿರುವ ಕಡೆ ಮಾತ್ರ ಚಾಲ್ತಿಯಲ್ಲಿಟ್ಟುಕೊಳ್ಳಬೇಕು. ii. ತಕಾವಿ ಸಾಲವನ್ನು ಗೊಬ್ಬರ, ಸುಧಾರಿತ ಬೀಜ, ಕ್ರೀಮಿನಾಶಕಗಳೇ ಮುಂತಾದ ಸಾಮಗ್ರಿಗಳ ರೂಪದಲ್ಲಿ ಮಾತ್ರ ನೀಡಬೇಕು. iii. ಸಹಕಾರಿ ಬ್ಯಾಂಕುಗಳ ಸದಸ್ಯರಿಗೆ ತಕಾವಿ ಸಾಲಗಳನ್ನು ನೀಡಕೂಡದು. ತಕಾವಿ ಸಾಲದ ಷರತ್ತುಗಳು ಸಹಕಾರಿ ಬ್ಯಾಂಕುಗಳ ಷರತ್ತುಗಳಿಗಿಂತಲೂ ಹೆಚ್ಚು ಅನುಕೂಲಕರವಾಗಿರಕೂಡದು. 3. ತಕಾವಿ ಸಾಲ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಅನಂತರವೂ ರಾಜ್ಯ ಸರ್ಕಾರಗಳು ತಮ್ಮ ಬಜೆಟ್‍ಗಳಲ್ಲಿ ಹಣವನ್ನು ನಿಗದಿ ಮಾಡಿ ಅದನ್ನು ಸಹಕಾರಿ ಬ್ಯಾಂಕುಗಳಿಗೆ ನೀಡಬೇಕು.

ಹೀಗೆ ಕೇಂದ್ರ ಸರ್ಕಾರವೂ ತಕಾವಿ ಸಾಲ ವ್ಯವಸ್ಥೆಯನ್ನು ಪರಿಶೀಲಿಸಿದ ಸಮಿತಿಗಳೂ ತಕಾವಿ ಸಾಲವನ್ನು ಸಹಕಾರಿ ಉದರಿಯೊಂದಿಗೆ ಸೇರಿಸಲು ಬೆಂಬಲಿಸಿವೆ. ಈ ಸಾಲ ವ್ಯವಸ್ಥೆಯನ್ನು ತ್ಯಜಿಸಿದ ಮೇಲೂ ರಾಜ್ಯ ಸರ್ಕಾರಗಳಿಗೆ ತಮ್ಮ ಬಜೆಟ್‍ಗಳಲ್ಲಿ ಈ ಬಗ್ಗೆ ಹಣವನ್ನು ನಿಯತ ಮಾಡುವುದನ್ನು ಮುಂದುವರಿಸಿ ಈ ಹಣವನ್ನು ಸಹಕಾರಿ ಉದರಿ ಬ್ಯಾಂಕುಗಳ ವಶಕ್ಕೆ ಕೊಡಬೇಕೆಂಬ ಸಲಹೆ ಮಾಡಲಾಗಿದೆ. ಅಲ್ಲದೆ ತಕಾವಿ ಸಾಲ ವ್ಯವಸ್ಥೆಯನ್ನು ತ್ಯಜಿಸುವುದರಿಂದ ಅದರ ಕಾರ್ಯನಿರ್ವಹಣಿಗೆ ಆಗುತ್ತಿದ್ದ ವೆಚ್ಚ ಉಳಿತಾಯವಾಗುತ್ತದೆ. ಈ ಅಂಶವನ್ನು ಗಮನಿಸಿ ರಾಜ್ಯ ಸರ್ಕಾರಗಳು ಸಹಕಾರಿ ಉದರಿ ಬ್ಯಾಂಕುಗಳಿಗೆ ತಕಾವಿ ಲೆಕ್ಕದಲ್ಲಿ ನೀಡುವ ಸಾಲದ ಮೇಲಿನ ಬಡ್ಡಿಯಲ್ಲಿ ರಿಯಾಯಿತಿ ತೋರಿಸಬೇಕೆಂಬ ಒಂದು ಸಲಹೆಯೂ ಉಂಟು. ಈ ಎಲ್ಲ ಸಲಹೆಗಳು ಕಾರ್ಯರೂಪಕ್ಕೆ ಬಂದ ಪಕ್ಷದಲ್ಲಿ ಸಹಕಾರಿ ಉದರಿ ಸುಲಭ ದರದಲ್ಲಿ ಸಿಗುವಂತಾಗುವುದಲ್ಲದೆ ಸಹಕಾರಿ ಉದರಿ ವ್ಯವಸ್ಥೆ ಉತ್ತಮಗೊಳ್ಳುವ ಸಂಭವೂ ಉಂಟು. ತಕಾವಿ ಸಾಲ ಒಂದು ಚಾರಿತ್ರಿಕ ಅಂಶವಾಗಿ ಮಾತ್ರ ಉಳಿದಿದೆ.																		(ಎ.ಬಿ.ಎ.)
								(ಪರಿಷ್ಕರಣೆ : ಬಿ ಎಸ್ ಶ್ರೀಕಂಠಾರಾಧ್ಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ